ಏಳನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ಈ ವರ್ಷ ಸಿಂಗಪೂರಿನಲ್ಲಿ ಭರ್ಜರಿಯಾಗಿ ನಡೆಯಿತು, ಸುಮಾರು ಮುನ್ನೂರಕ್ಕೂ ಹೆಚ್ಚು ಕಲಾವಿದರು ಕರ್ನಾಟಕದ ವಿವಧ ಭಾಗಗಳಿಂದ ಬಂದು ಸಿನ್ಗನ್ನಡಿಗರಿಗಾಗಿ ಒಂದು ಚಿಕ್ಕ ಕರ್ನಾಟಕವನ್ನೇ ಚೊಕ್ಕದಾದ ಸಿಂಗಪೂರಿನಲ್ಲಿ ಸೃಷ್ಟಿಸಿದರು! ಹಲವಾರು ಪ್ರಾಯೋಜಕರು, ಸಿಂಗಪೂರ್ ಕನ್ನಡ ಸಂಘ ಹಾಗು ಹೃದಯವಾಹಿನಿ ಪತ್ರಿಕೆಯ ಆರ್ಥಿಕ ಮತ್ತು ಹೃತ್ಪೂರ್ವಕ ಸಹಕಾರದಿಂದ ನಡೆದ ಈ ಅದ್ಭುತ ಹಬ್ಬ ವೀಕ್ಷಕರ ಕಣ್ಣಿಗೆ ಕನ್ನಡದ ಬಹುರೂಪವನ್ನು ಮರೆಯಲಾರದಂತೆ ಅಚ್ಚಳಿಯುವ ಹಾಗೆ ನಿರ್ಮಿಸಿತು.
ಕೇವಲ ಎರಡೇ ದಿನಗಳಲ್ಲಿ ನಮ್ಮ ಸಂಸ್ಕೃತಿ, ಇತಿಹಾಸಗಳನ್ನು ಎತ್ತಿ ಹಿಡಿಯುವುದು ಅಸಾಧ್ಯ, ಆದರೂ ಈ ಪ್ರಯತ್ನ ಶ್ಲಾಘನೀಯ. ಹಲವಾರು ಕನ್ನಡದ ದಿಗ್ಗಜರು ಅರಿವಿನ ಮಾತುಗಳನ್ನಾಡಿ ಇಂಥಹ ಒಂದು ಸಮ್ಮೇಳನ ಕನ್ನಡಕ್ಕಷ್ಟೇ ಸೀಮಿತವಾಗದೆ ಎಲ್ಲ ನಾಡಿನ ಎಲ್ಲ ಸಂಸ್ಕೃತಿಗೂ ಅತ್ಯಾವಶ್ಯಕ ಎಂಬ ಸತ್ಯವನ್ನು ಪುನರುಚ್ಚರಿಸಿದರು. ಕಾರ್ಯಕ್ರಮವು ಹಲವಾರು ಮುಖಗಳನ್ನು ಹೊತ್ತು ತಂದು ಆದಿಯಿಂದ ಅಂತ್ಯದವರೆಗೂ ಸಫಲತೆಯ ಫಲವನ್ನು ತನ್ನದಾಗಿಸಿಕೊಂಡಿತು. ಅಂತ್ಯವಿರದಿರಲಿ ಎಂಬುದು ನನ್ನ ಆಸೆ ಹಾಗು ನಂಬಿಕೆ.
ಪದ್ಮಶ್ರೀ ಕದ್ರಿ ಗೋಪಾಲ್ನಥರ ಶಃನಾಯಿಯಿಂದ ಹೊರಹೊಮ್ಮಿದ ಜಯ ಭಾರತ ಜನನಿಯ ತನುಜಾತೆ ಇಂದ ಪ್ರಾರಂಭಗೊಂಡ ಸಮ್ಮೇಳನ ಚಪ್ಪಾಳೆಯ ಸುರಿಮಳೆಯಷ್ಟೇ ಅಲ್ಲದೆ ಜನರನ್ನು ಆಸನಗಳಿಂದ ಎದ್ದು ನಿಲ್ಲಿಸಿ ಕನ್ನಡಮ್ಮನಿಗೆ ಗೌರವ ಸಲ್ಲಿಸುವಂತೆ ಮಾಡಿತು, ಮೈನವಿರೀಳಿಸಿತು!
ಸನ್ಮಾನ ಸುಖ ಎಂಬ ಹಾಸ್ಯ ನಾಟಕ ಜನರಲ್ಲಿ ನಗೆ ಹುಟ್ಟಿಸಿದರೆ, ಕವಿ ಗೋಶ್ಥಿಯು ಆಲೋಚನೆಯುಂಟು ಮಾಡಿತು. ಸಿಂಗಪೂರದ ಗಾನ ಕೊಗಿಲೆಯಾದ ಭಾಗ್ಯಾ ಮೂರ್ತಿ ಹಾಗು ಅವರ ಸುಪುತ್ರ ಕಿಶನ್ ಸೃಷ್ಟಿಸಿದ ವಿಶ್ವ ಕನ್ನಡ ಗೀತೆ ಎಂಬ ನೂತನ ಸಂಯೋಜನೆಯನ್ನು ಸಿಂಗಪೂರದ ಹಾಡುಗಾರರು ಪ್ರಸ್ತುತ ಪಡಿಸಿ ಪ್ರಶಂಸೆ ತಮ್ಮದಾಗಿಸಿಕೊಂಡರು.
No comments:
Post a Comment